Sunday, January 2, 2011

ಗುರಿ ಸಣ್ಣದಾಗಿರಲಿ, ಮನೋಬಲ ದೊಡ್ಡದಾಗಿರಲಿ

Where there is will there is a way
ಸ್ನೇಹಿತರೆ, ಈ ವರ್ಷ ಯಾವ ಹೊಸ ನಿರ್ಣಯ (new year resolution) ಕೈಗೊಂಡಿರಿ? ತೂಕ ಕಳ್ಕೊಬೇಕು, ಕಾರು ಕೊಳ್ಕೊಬೇಕು, ಮದುವೆ ಮಾಡ್ಕೊಬೇಕು, ಹೊಸ ಮನೆ ಕಟ್ಕೊಬೇಕು, ಸಾಲ ಪಡೀಬಾರ್ದು, ಹೊಸದೇನಾದರೂ ಕಲೀಬೇಕು, ಆರೋಗ್ಯದೆಡೆ ಹೆಚ್ಚು ಗಮನ ಕೊಡಬೇಕು, ಲೈಫು ಸಖತ್ತಾಗಿ ಎಂಜಾಯ್ ಮಾಡಬೇಕು, ಸುಳ್ಳು ಹೇಳಬಾರದು, ಕನ್ನಡ ಚಿತ್ರಾನೇ ನೋಡಬೇಕು ಎಟ್ಸಿಟ್ರಾ ಎಟ್ಸಿಟ್ರಾ...

ಈ ನಿರ್ಣಯಗಳನ್ನು ಪಾಲಿಸ್ತೀವೋ ಬಿಡ್ತೀವೋ, ಅಂತೂ ಹೊಸ ವರ್ಷದ ನಿರ್ಣಯಗಳನ್ನು ತೊಗೊಂಡೇ ತಗೊಳ್ತೀವಿ. ಇಂಥ ನಿರ್ಣಯಗಳನ್ನು ತೆಗೆದುಕೊಳ್ಳುವುದು ಒಳ್ಳೆಯದೇ. ಅನೇಕರು ತಮ್ಮ ನಿರ್ಣಯಕ್ಕೆ ತಲೆಬಾಗಿ ಯಶಸ್ವಿಯೂ ಆಗುತ್ತಾರೆ. ಹಲವರು ಎರಡು ತಿಂಗಳು ದಾಟುತ್ತಿದ್ದಂತೆ ಪಾಲಿಸಲಾಗದೆ ಶರಣಾಗತಿಯನ್ನು ತೋರಿರುತ್ತಾರೆ. ಇಂಥ ಕೆಲ ನಿರ್ಣಯಗಳನ್ನು ಹೊರತುಪಡಿಸಿ ಸಿಗರೇಟು ಸೇದುವ ಹಠ ಮತ್ತು ಕುಡಿತದ ಚಟ ಬಿಡುವ ವಿಷಯಕ್ಕೆ ಬಂದರೆ, ಅವರ ನಿರ್ಣಯ ಒಂದೇ ವಾರದಲ್ಲಿ ಧೂಮಲೀಲೆಯಾಗಿಬಿಟ್ಟಿರುತ್ತದೆ ಅಥವಾ ನಿರ್ಣಯದ ನಿಶೆಯೇ ಇಳಿದುಹೋಗಿರುತ್ತದೆ.

ಚೇಂಜ್4ಲೈಫ್ ಎಂಬ ಸಂಸ್ಥೆ ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಇನ್ನಾವುದೇ ನಿರ್ಣಯ ಕೈಗೊಂಡಾಗ ಸಿಗುವ ಯಶಸ್ಸಿನ ಪ್ರಮಾಣಕ್ಕಿಂತ ಸಿಗರೇಟು ಅಥವಾ ಕುಡಿತ ಬಿಡುವ ನಿರ್ಣಯ ಕೈಗೊಂಡಾಗ ಸಿಗುವ ಯಶಸ್ಸಿನ ಪ್ರಮಾಣ ತುಂಬ ಕಡಿಮೆ. ನಿರ್ಣಯ ಕೈಗೊಂಡ ಒಂದೇ ವಾರದಲ್ಲಿ ಮತ್ತೆ ಹಳೆ ಚಾಳಿಗೆ ಮರಳಿರುತ್ತಾರೆ.

ಏಕೆ ಹೀಗೆ? : ಇದಕ್ಕೆ ಕಾರಣವೂ ಇಲ್ಲದಿಲ್ಲ. ಯಾವುದೇ ಮಹತ್ವದ ನಿರ್ಣಯ ಕೈಗೊಂಡಾಗ ಅದನ್ನು ಪಾಲಿಸುವಾಗ ಕುಟುಂಬದ ಅಥವಾ ಸ್ನೇಹಿತ ಬಳಗದ ಬೆಂಬಲ ತುಂಬಾ ಅವಶ್ಯಕ. ಆತ್ಮೀಯರು ಕೆಲ ಚಟಗಳನ್ನು ಬಿಡುವಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಮನಸು ತಾನಾಗಿಯೇ ದೃಢವಾಗುತ್ತಾ ಸಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೋಬಲವಿದ್ದರೆ ಎಂಥ ಅಡೆತಡೆಗಳನ್ನೂ ದಾಟಿ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಿದೆ.

ಈ ಮನೋಬಲ ಕುಡಿತ ಅಥವಾ ಸಿಗರೇಟು ಸೇದುವವರಲ್ಲಿ ಕಡಿಮೆ ಇರುವುದು ಅಧ್ಯಯನದಲ್ಲಿ ಕಂಡುಬಂದಿದೆ. 'ಇದೊಂದು ದಿನ ಇರಲಿ ಬಾರಮ್ಮ, ನಾಳೆಯಿಂದ ಬಿಟ್ಟುಬಿಡು, ಖಂಡಿತ ಬಲವಂತ ಮಾಡಲ್ಲ' ಅಂತ ತೇಲಿಸುವ ಅಥವಾ ಮುಳಿಗಿಸಿಬಿಡುವ ಸ್ನೇಹಿತರೇ ಜಾಸ್ತಿಯಾಗಿರುತ್ತಾರೆ. ಆಯ್ತು ಇವತ್ತೊಂದಿನ ನಿಮ್ಮ ಮಾತು ಕೇಳ್ತೀನಿ ಅಂದೋರು ಮರುದಿನ ಯಥಾಪ್ರಕಾರ ಹ್ಯಾಂಗೋವರಲ್ಲಿ ಎಲ್ಲಾ ನಿರ್ಣಯಗಳನ್ನು ಮರೆತುಬಿಡ್ತಾರೆ.

ಪರಿಹಾರವೇನು? : ಮನೋಬಲವೊಂದಿದ್ದರೆ ಈ ಕ್ಷಣಿಕ ಆಕರ್ಷಣೆಗಳಿಂದ ಮುಕ್ತಿ ಹೊಂದಲು ಮತ್ತು ಆರೋಗ್ಯವಂತ ಜೀವನಕ್ರಮವನ್ನು ರೂಢಿಸಿಕೊಳ್ಳಲು ಖಂಡಿತ ಸಾಧ್ಯವಿದೆ. ಇಂಥ ನಿರ್ಣಯಗಳನ್ನು ಜನವರಿ 1ರಂದೇ ಕೈಗೊಳ್ಳಬೇಕೆಂದೇನೂ ಇಲ್ಲ. ಹೊಸ ವರ್ಷದ ಉತ್ಸಾಹದಲ್ಲಿ, ಒಂದೇ ದಿನದಲ್ಲಿ ಸಾಧಿಸಿಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿ ಕೈಗೊಂಡ ನಿರ್ಣಯಗಳು ಬಹಳ ದಿನ ಉಳಿಯುವುದಿಲ್ಲ. ನಿಧಾನವಾಗಿ ಯೋಚಿಸಿ, ಹಿತಚಿಂತಕರೊಂದಿಗೆ ಚರ್ಚಿಸಿ, ನಂತರ ದೃಢ ನಿರ್ಧಾರಕ್ಕೆ ಬನ್ನಿ ಅಂತಾರೆ ಮನೋವಿಜ್ಞಾನಿಗಳು.

ಕೆಲವರು ಒಂದೊಂದೇ ಹಂಪ್ ದಾಟಿ ಬರುವ ಬದಲು ಎಲ್ಲಾ ಹಂಪ್ಸ್ ಗಳನ್ನು ಒಂದೇ ಜಿಗಿತದಲ್ಲಿ ದಾಟಲು ಯತ್ನಿಸುತ್ತಾರೆ. ಅದು ತಪ್ಪು. ಮತ್ತೆ ಕೆಲವರು ತಮ್ಮ ನಿರ್ಣಯಗಳ ಬಗ್ಗೆ ಎಲ್ಲ ಕಡೆ ಟಾಂಟಾಂ ಹೊಡೆಯಲು ಪ್ರಾರಂಭಿಸುತ್ತಾರೆ. ಇಂಥ ಸಂದರ್ಭದಲ್ಲಿ ದಾರಿ ತಪ್ಪುವ ಸಂಭವನೀಯತೆಯೇ ಹೆಚ್ಚು. ಸಲಹೆಗಳನ್ನ ಕೇಳಬೇಕು ನಿಜ. ಆದರೆ, ಅದರ ಮೇಲೆಯೇ ಅವಲಂಬಿತವಾಗಿರಬಾರದು. ಹಿತೈಷಿಗಳು ನೀಡಿದ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವ ಗಟ್ಟಿ ಮನಸ್ಸು ನಮ್ಮ ಮನೋಬಲದೊಂದಿಗೆ ಸೇರಿದರೆ ಯಾವುದೂ ಅಸಾಧ್ಯವಲ್ಲ.

ಸಿಗರೇಟು, ಕುಡಿತ ವ್ಯಜಿಸುವುದು ಆರಂಭದಲ್ಲಿ ಕಷ್ಟವೆನಿಸಬಹುದು. ಇದು ಒಂದೇ ದಿನದಲ್ಲಿ ಸಂಭವಿಸುವ ಪವಾಡವೂ ಅಲ್ಲ. ಸಿಗರೇಟು ಸೇದದಿದ್ದರೆ ಬೆಳಗಿನ ಕಾರ್ಯಕ್ರಮ ಸರಾಗವಾಗಿ ಆಗುವುದಿಲ್ಲ ಎಂಬ ಮಟ್ಟಿಗೆ ಹಲವರು ಅಡಿಕ್ಟ್ ಆಗಿರುತ್ತಾರೆ. ಆದರೆ, ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ. ಸಿಗರೇಟು ಸೇವನೆ ಶೋಕಿಯಲ್ಲ, ಎಂಥದೇ ಆನಂದವೂ ಸಿಗುವುದಿಲ್ಲ. ಸಿಗರೇಟು ಬಿಡುವುದು ಬಲು ಕಷ್ಟ ಎನ್ನುವವರಿಗೆ ಎಂಬ ಚ್ಯೂಯಿಂಗ್ ಗಮ್ ಅನ್ನು ಬಿಡುಗಡೆ ಮಾಡಲಾಗಿದೆ. ತಂಬಾಕು ಸೇವನೆಯ ಅನುಭವ ನೀಡುತ್ತಲೇ ನಮ್ಮನ್ನು ಸಿಗರೇಟಿನಿಂದ ದೂರ ಮಾಡುತ್ತದೆ ಅಂತಾರೆ. ಪ್ರಯತ್ನಿಸಿ ನೋಡಿ.

ಒಂದನ್ನು ಮಾತ್ರ ಗಮನದಲ್ಲಿಡಿ. ಗುರಿಯು ಸಣ್ಣದಾಗಿರಲಿ, ಮನೋಬಲ ದೊಡ್ಡದಾಗಿರಲಿ. ಆರೋಗ್ಯವಂತ ಜೀವನವು ನಿಮ್ಮದಾಗಿರಲಿ.

No comments: