
ಬೆಂಗಳೂರು, ಡಿ.20 : ರೈತರ ಭೂಮಿಯನ್ನು ಕೆಐಎಡಿಬಿ, ಬಿಡಿಎ ಅಥವಾ ಯಾವುದೇ ಸರಕಾರಿ ಸ್ವಾಯತ್ತ ಸಂಸ್ಥೆಗಳ ಮೂಲಕ ಭೂಸ್ವಾಧೀನಪಡಿಸಿಕೊಳ್ಳುವ ಮೊದಲು ಸಂಬಂಧಪಟ್ಟ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಪೂರ್ವಾನುಮತಿ ಕಡ್ಡಾಯಗೊಳಿಸುವ ವಿಚಾರವನ್ನು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಬಿಂಬಿಸಿದೆ.
ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಸಮ್ಮುಖದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಪಿ ಜಿ ಆರ್ ಸಿಂಧ್ಯಾ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿರುವ ಜೆಡಿಎಸ್, ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ದುರಾಡಳಿತದ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಬೆಳಕು ಚೆಲ್ಲಿದೆ.
ಪ್ರಾದೇಶಿಕ ಪಕ್ಷ ಎಂದು ಹೇಳಿಕೊಂಡಿರುವ ಜೆಡಿಎಸ್, ಚುನಾವಣೆಯಲ್ಲಿ ಭರವಸೆ ನೀಡುವುದಿಲ್ಲ, ಬದಲಿಗೆ ಎರಡೂವರೆ ವರ್ಷಗಳ ಅವಧಿಯಲ್ಲಿ ಬಿಜೆಪಿ ದಿವಾಳಿಯತ್ತ ತಂದಿತ್ತಿರುವ ಪಂಚಾಯತಿರಾಜ್ ವ್ಯವಸ್ಥೆಯ ರೋಗ ಲಕ್ಷಣಗಳನ್ನು ಗುರುತಿಸಿ ಅದಕ್ಕೆ ಎಲ್ಲೆಲ್ಲಿ ಯಾವ ರೀತಿಯ ಚಿಕಿತ್ಸೆಯಾಗಬೇಕೆಂಬುದರ ಬಗ್ಗೆ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಲು ಮುಂದಾಗಿದೆ.
ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನ ಭತ್ತೆ ಮೊದಲಾದ ಅರ್ಜಿಗಳನ್ನು ಸ್ವೀಕರಿಸಿದ ಒಂದು ತಿಂಗಳೊಳಗೆ ತಹಶೀಲ್ದಾರರೇ ಖುದ್ದು ಹಣ ಮಂಜೂರು ಮಾಡುವಂತೆ ಹೋರಾಟ. ಗ್ರಾಮೀಣ ಮೂಲಭೂತ ಸೌಲಭ್ಯಗಳಾದ ಕೊಳವೆ ಬಾವಿ, ಕೊಳವೆ ನೀರು ಸರಬರಾಜು, ಕಿರು ನೀರು ಸರಬರಾಜು, ಹಳ್ಳಿ ರಸ್ತೆಗಳ ದುರಸ್ಥಿ, ಶಾಲಾ ಕೊಠಡಿಗಳ ನಿರ್ಮಾಣ, ಶೌಚಾಲಯ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ನಡೆಸಲು ಬಿಜೆಪಿ ಸರಕಾರ ಮೇಲೆ ಒತ್ತಡ. ಬ
ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ ಮೊದಲಾದವುಗಳಿಗೆ ಆದ್ಯತೆ, ಪ್ರಸಕ್ತ ಯೋಜನೆಗಳ ಅನುಷ್ಠಾನಕ್ಕಾಗಿ ಹಕ್ಕೊತ್ತಾಯದ ವಿಷಯಗಳಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ. ಬಿಜೆಪಿ ಸರಕಾರದ ಅನಾಚಾರಗಳು ಈ ಬಾರಿಯ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಕೆಗಾಗಿ ಹೋರಾಟ ಪ್ರಣಾಳಿಕೆಯ ಪ್ರಮುಖ ಆಕರ್ಷಣೆಯಾಗಿದೆ.