
ನವದೆಹಲಿ, ಡಿ. 22 : ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಟ್ವೆಂಟಿ-20 ಮತ್ತು ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ ಟೀಮ್ ಇಂಡಿಯಾ ತಂಡ ಪ್ರಕಟಗೊಂಡಿದ್ದು, ಉತ್ತರ ಪ್ರದೇಶದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರೆ, ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಮತ್ತೆ ವಿಫಲರಾಗಿದ್ದಾರೆ.
ಏಕೈಕ ಟ್ವೆಂಟಿ 20 ಪಂದ್ಯ ಜನವರಿ 9ರಂದು ಡರ್ಬಾನ್‌ನಲ್ಲಿ ನಡೆಯಲಿದ್ದು, ಐದು ಏಕದಿನ ಸರಣಿ ಜನವರಿ 12ರಿಂದ ಆರಂಭಗೊಳ್ಳಲಿದೆ. ಕಳೆದ ನ್ಯೂಜಿಲ್ಯಾಂಡ್ ಸರಣಿಗೆ ವಿಶ್ರಾಂತಿ ಪಡೆದಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹವಾಗ್ ಮತ್ತು ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡಕ್ಕೆ ಮರಳಿದ್ದಾರೆ.
ಭಾರತ ಉಪಖಂಡದಲ್ಲಿ ನಡೆಯಲಿರುವ ವಿಶ್ವಕಪ್ ಸರಣಿಗೆ ಮೊದಲು ನಡೆಯಲಿರುವ ಈ ಸರಣಿ ಭಾರತಕ್ಕೆ ಅತ್ಯಂತ ಮಹತ್ವದಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯಲ್ಲಿ ಆಡುವ ಬಹುತೇಕ ಮಂದಿ ಆಟಗಾರರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ತಂಡದಲ್ಲಿ ಸ್ಥಾನದಲ್ಲಿ ಪಡೆದಿರುವ ಪಿಯೂಶ್ ಚಾವ್ಲಾರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇನ್ನೊಂದು ಅವಕಾಶ.
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದಲ್ಲಿದ್ದ ರಾಹುಲ್ ದ್ರಾವಿಡ್ , ವಿವಿಎಸ್ ಲಕ್ಷ್ಮಣ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ, ಉಮೇಶ್ ಜಾದವ್ ಟೆಸ್ಟ್ ಸರಣಿ ಮುಗಿದ ತಕ್ಷಣ ಸ್ವದೇಶಕ್ಕೆ ವಿಮಾನ ಏರಳಿದ್ದಾರೆ. ಟೆಸ್ಟ್ ತಂಡದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಯೂಸುಫ್ ಪಠಾಣ್ ಏಕದಿನ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.
ಭಾರತದ ತಂಡ : ಮಹೇಂದ್ರ ಸಿಂಗ್ ಧೋನಿ(ನಾಯಕ/ವಿಕೆಟ್ ಕೀಪರ್), ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಆಶಿಶ್ ನೆಹ್ರಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್ ಅಶ್ವಿನ್, ಯೂಸುಫ್ ಪಠಾಣ್, ಪಿಯೂಷ್ ಚಾವ್ಲಾ, ಎಸ್ ಶ್ರೀಶಾಂತ್.