Showing posts with label ಜೋಗೆರ ದಾಸಪ್ಪ ದಾಸರ ಜೋಗೆಪ್ಪ. Show all posts
Showing posts with label ಜೋಗೆರ ದಾಸಪ್ಪ ದಾಸರ ಜೋಗೆಪ್ಪ. Show all posts

Tuesday, December 21, 2010

ಜೋಗೆರ ದಾಸಪ್ಪ ದಾಸರ ಜೋಗೆಪ್ಪ

ನೀರು ನೀರನ್ನು ಆಕರ್ಷಿಸುವಂತೆ, ದುಡ್ಡು ದುಡ್ಡನ್ನು ಆಕರ್ಷಿಸುವಂತೆ ದಾರಿದ್ರ್ಯ ದಾರಿದ್ರ್ಯವನ್ನು ಆಕರ್ಷಿಸುವಂತೆ ಅವರೇನನ್ನು ಆಕರ್ಷಿಸಿದರು ?
ಮೊಹಮ್ಮದ್ ರಫೀಕ್

Mohammad Rafiq.ಬೇಸಿಗೆಯ ಬಿಸಿಲು ಅದು. ಹಾಗೆಂದು ಹೇಳಿದರೆ ಏನು ಸ್ಪೇಷಲ್ಲಾಗಿ ಹೇಳಿದಂತಾಯಿತು !! ಬರೀ ಬಿಸಿಲೇ ಅಲ್ಲಿ 12 ತಿಂಗಳುಗಳೂ. ಆ ಮಧ್ಯ ಈ ಮಧ್ಯ ಮೋಡ ಆವರಿಸಿ ನಾಲ್ಕು ಹನಿಗಳನ್ನುದುರಿಸಿ ಹೋಗುತ್ತದೆ. ವೇಶ್ಯೆಯು ತನ್ನ ಗಿರಾಕಿ ಸತ್ತ ಸುದ್ದಿ ಕೇಳಿ ಅತ್ತಂತೆ. ರಾತ್ರಿ ಸೂರ್ಯನು ಬರುವದಿಲ್ಲ ಅಂತಲೇ ಬಿಸಿಲು ಇಲ್ಲಾ ಅಷ್ಟೇ. ಹೀಗಾಗಿ ರಾತ್ರಿ ಚಳಿಗಾಲ ಇರುತ್ತದೆ ಇಲ್ಲಿ. ಜೀವನವೆಂಬುದು ಜಗತ್ತಿನ ಯಾವುದೇ ಮೂಲೆಯಲ್ಲಿ, ಧ್ರುವಗಳಲ್ಲಿ, ದೇಶಗಳಲ್ಲಿ, ಊರಿನಲ್ಲಿ, ಬಡವ ಸತ್ತ ಎಂದೋ ಇಲ್ಲಾ ಶ್ರೀಮಂತ ಮತ್ತಷ್ಟು ಶ್ರೀಮಂತನಾದನೆಂದೋ ಯೋಚಿಸುತ್ತ ನಿಂತಿರುವುದಿಲ್ಲ. ಅದು ತನ್ನ ಪಾಡಿಗೆ ಓಡುತ್ತಲೇ ಇರುತ್ತದೆ. ಅದರೊಂದಿಗೆ ತಮ್ಮ ಜಟಕಾ ಓಡಿಸಿ "ಬದುಕು ಜಟಕಾ ಬಂಡಿ" ಎಂದು ಅಣ್ಣಾವ್ರ ಹಾಡು ಹಾಡಿ, ತಿಂದು ಮಲಗಿದರಾಯಿತು. ಇರುವವರಿಗೇ ಮತ್ತೆ ಮತ್ತೆ ಕೊಡುವ ಆ ದೇವರರಿರುವಾಗ ಬೇಡಿದರೆಷ್ಟೋ ಬಿಟ್ಟರೆಷ್ಟೋ ? ಮೈಗೆ-ಮನಸ್ಸಿಗೆ ಒಪ್ಪಿಗೆ ಆಗುವಷ್ಟು ದುಡಿಯುವದು. ಮೈ ಕೊಂಚ ಭಾರ ಎಂದು ಹೇಳಿದರೆ ಕುಡಿಯುವದು, ಕೈ ಸ್ವಲ್ಪ ಭಾರವೆನಿಸಿದರೆ ಹೆಂಡತಿ-ಮಕ್ಕಳಿಗೆ ಹೊಡೆಯುವದು, ನಾಲಿಗೆ ಇನ್ನೂ ಹಗುರ ಎನಿಸಿದರೆ ಬೀದಿ ಜನಕ್ಕೆಲ್ಲ ಮಂತ್ರೋಪಚಾರದಿಂದ ಆದರಿಸುವದು. ಇಷ್ಟೆಲ್ಲ ಆದ ಮೇಲೆ ಕಣ್ಣು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಮತ್ತೆ ಕಣ್ಣು ತೆರೆದ ಮೇಲೆ "ಎಂದಿನಂತೆ" ಎಂದು ಬರೆದು ಬೀಸಾಕಿದ ಜೀವನ.



ಇವನೊಬ್ಬನದೇ ಅಲ್ಲ. "ಹುಲಿಗಲ್ಲಿ"ನಲ್ಲಿ ಎಲ್ಲರ ಜೀವನವೂ ಎಂದಿಗೂ "ಎಂದಿನಂತೆ". ಅಲ್ಲಿ ದುಡಿದು ಶ್ರೀಮಂತರಾದವರಿಲ್ಲ. ಕುಳಿತು ಉಂಡು ದರಿದ್ರರಾದವರಿಲ್ಲ. ಜೋಗೆರ ದಾಸಪ್ಪನೂ ಆ ದುಡಿದು ಶ್ರೀಮಂತರಾಗದ ಜನರಲ್ಲಿ ಒಬ್ಬ. ಹಾಗಂತ ಕುಳಿತು ತಿನ್ನುವ ರೂಢಿ ಅವನಿಗಿಲ್ಲ ಎಂದು ಹೇಳಿಲ್ಲ. ಆ ಕಡೆಗೂ ಸೇರುವ ಈ ಕಡೆಗೂ ಸೇರುವ ಮಿಶ್ರ ತಳಿ ಮನುಷ್ಯ ದಾಸರ ಜೋಗೆಪ್ಪ. ಇದೇನು, ಎರಡೆರಡು ಬೇರೆ-ಬೇರೆ ವ್ಯಕ್ತಿಯ ಹೆಸರುಗಳೋ ಅಥವಾ ತಂದೆ-ಮಕ್ಕಳ ಹೆಸರುಗಳೋ? ಅಂತ ತಲೆ ಕೆರೆದುಕೊಳ್ಳಬೇಡಿ.ಜೋಗೆರ ದಾಸಪ್ಪ-ದಾಸರ ಜೋಗೆಪ್ಪ ಇಬ್ಬರೂ ಒಂದೇ. ಅವನಿಗೆ ಕೆಲವು ಜನ ಹೀಗೆ ಕರೆದರೆ ಇನ್ನು ಕೆಲವರು ಹಾಗೆ ಕರೆಯುತ್ತಾರೆ. ನಿಜವಾದ ಹೆಸರು ಯಾವುದು, ಮನೆತನದ ಹೆಸರು ಯಾವುದು ಅಂತ ಸಾಬೀತು ಪಡಿಸಲಿಕ್ಕೆ ಅವನಲ್ಲಿ ಮೆಟ್ರಿಕ್ ಸರ್ಟಿಫಿಕೇಟ್ ಇಲ್ಲ. ಹಾಗೆಂದರೇನೂ ಎಂಬುದು ಅವನಿಗೆ ಗೊತ್ತೂ ಇಲ್ಲ. ಇರಲಿ ಬಿಡಿ ನಾವು ಅವನನ್ನು ಸಂಕ್ಷಿಪ್ತವಾಗಿ ಜೆ.ಡಿ/ಡಿ.ಜೆ ಅಂದರಾಯಿತು.

ಹುಲಿಗಲ್ಲು ಚಿಕ್ಕ ಊರೂ ಅಲ್ಲ, ದೊಡ್ಡ ಪೇಟೆಯೂ ಅಲ್ಲ. ಗುರುವಾರಕ್ಕೊಂದು ಸಂತೆ ನಡೆಯುತ್ತೆ. ಹಾಗಾಗಿ ಅಲ್ಲಿ ಒಂದು ಸಂತೆ ಮಾರ್ಗವಿದೆ. ಈ ಮಾರ್ಗದಲ್ಲಿ ಶೆಟ್ಟರವು ದಿನಸಿ ಅಂಗಡಿಗಳು ಪ್ರಮುಖ. ಬಂಗಾರ-ಆಭರಣಗಳ ,ಬಟ್ಟೆಯವು ಶೇಠಜೀಯ ಶಾಪುಗಳು ಅವುಗಳ ಮಧ್ಯ ಇವೆ. ಊರ ಹನುಮನ ಗುಡಿ, ಅಲ್ಲಿಂದ ಪ್ರಾರಂಭವಾಗುವುದೇ ಕಿಲ್ಲಾ ಓಣಿ. ಈ ಓಣಿಯ ಎಲ್ಲ ಮನೆಗಳೂ ಕೃಷಿಕರವೇ. ಸಂತೆ ಓಣಿ ಹಿಂಭಾಗ ಮುಲ್ಲಾ ಮಸೀದಿ. ಮೊಹರ್ರಂ ಹಬ್ಬದ ದಿನಗಳಲ್ಲಿ ಮಾತ್ರ ಅಲ್ಲಿ ಭರ್ತೀ ಜನ. ಬೆಲ್ಲ-ಬಡೇ ಸೋಪಿನ ಶರಬತ್ ಕುಡಿದು "ಯಂಬಲರೋ ಯಾಯಿಂಬೋ ಧಿನ್" ಅಂತ ಕೂಗಿ ಸರ್ವಧರ್ಮ ಸಮನ್ವಯ ಮೆರೆಯುತ್ತಾರೆ ಎಲ್ಲರೂ. ಆ ಮಸೀದಿಯ ಅಕ್ಕ-ಪಕ್ಕದಲ್ಲಿ ರಬ್ಬಾನಿ,ಸುಬಹಾನಿ ಮತ್ತು ಇನ್ನೂ 8-10 ಮುಸ್ಲಿಂ ಮನೆಗಳು. ಅವುಗಳಲ್ಲಿ ಒಂದು ಕಸಾಯಿಯ ಮನೆ. ಈ ಸಂತೆ ಮಾರ್ಗದಿಂದ ಮೇಲಕ್ಕೆ ಹೋದರೆ ರಾಮ ಮಂದಿರ. ಅದರ ಬದಿಯಲ್ಲೇ ಮಾರವಾಡಿ ಗಲ್ಲಿ. ಹೇಳಲಿಕ್ಕೆ ಮಾತ್ರ "ಗಲ್ಲಿ", ಮನೆಗಳು ಐದು ಮಾತ್ರ. ಆದರೆ ಆ ಐದು ಮನೆಗಳ ಉದ್ದಗಲ ಊರಿನ ಇತರ ಗಲ್ಲಿಗಳಿಗಿಂತಲೂ ದೊಡ್ಡದು. ಸಂತೆ ಮಾರ್ಗದ ಮಧ್ಯದಿಂದಲೇ ಪ್ರಾರಂಭವಾಗುವ ತರಕಾರಿ ಅಂಗಡಿಗಳು ರಾಮ ಮಂದಿರಕ್ಕೆ ಕೊನೆಗೊಳ್ಳುತ್ತವೆ. ಊರಿಗೊಂದು ಕ.ಗಂ.ಮ.ಶಾ.ನಂ 2 ಹಾಗೂ ಕ.ಹೆ.ಮ.ಶಾ.ನಂ 1 ಎಂಬ ಎರಡು ಶಾಲೆಗಳು. ಇಲ್ಲಿ 1 ನೇ ಕ್ಲಾಸಿಗೆ ಒಂದು ಕೋಣವನ್ನು ತಂದು ಸೇರಿಸಿದರೂ ಸರಿ ಅದು ಹದಿನಾಲ್ಕೇ ವರ್ಷಗಳಲ್ಲಿ 7ನೇ ತರಗತಿ ಪಾಸು ಮಾಡಿಕೊಂಡು ಹೊರಬರುತ್ತದೆ. ಆ ಕೋಣ ಏಳೇ ವರ್ಷಗಳಲ್ಲಿ ಪಾಸು ಮಾಡಿಕೊಳ್ಳುತ್ತಿತ್ತೋ ಏನೋ. ಆದರೆ ಈ ಊರಿನ ಗಂ.ಮ ಮತ್ತು ಹೆಂ.ಮ ತಮ್ಮ ಛಾಪು ಮೂಡಿಸಿರುವದಂತು ಹೀಗೆ. ಕ.ಗಂ.ಮ.ಶಾಲೆಗೆ ದೇಶಪಾಂಡೆ ಗುರುಗಳೇ ಮುಖ್ಯೋಪಾಧ್ಯಾಯರು, ಕ.ಹೆ.ಮ.ಶಾಲೆಗೆ ಶ್ರೀಮತಿ ದೇಶಪಾಂಡೆ ಗುರುಮಾತೆಯರೇ ಮುಖ್ಯೋಪಾಧ್ಯಾಯನಿ.

ಈ ನಮ್ಮ ಜೆ.ಡಿ/ಡಿ.ಜೆ ಯ ಜಾತಿಯ ಜನರ ಒಂದು ವೈಶಿಷ್ಟತೆ ಎಂದರೆ ಇವರು ಎಲ್ಲ ಕಲೆಗಳನ್ನೂ, ವ್ಯಾಪಾರಗಳನ್ನೂ ಬಲ್ಲರು. ಆದರೆ ಒಂದೊಂದು ಮನೆತನ ಒಂದೊಂದು ಬಗೆಯ ಉದ್ಯೋಗವನ್ನೇ ಹೊಟ್ಟೆಪಾಡಿಗೆ ಆರಿಸಿಕೊಂಡಿರುತ್ತದೆ. ಈ ನಮ್ಮ ಜೆ.ಡಿ/ಡಿ.ಜೆ ಯ ಮಾವ ಶಕುನ ಹಕ್ಕಿಗಳ ಭಾಷೆಯಲ್ಲಿ ಕರತಲಾಮಲಕ. ನಿನ್ನೆ ಹಕ್ಕಿಗಳು ಹೇಳಿದ ಭವಿಷ್ಯದ ಮಾತನ್ನು ಈ ಸುಮಾರು 78/79 ಮನೆಗಳಿರುವ ಹುಲಿಕಲ್ಲಿನ ಮಂದಿಗೆ ಸರಿಯಾಗಿ ತಲುಪಿಸುತ್ತಾನೆ. ಇವನಿಗೆ ಪ್ರತಿಯೊಬ್ಬರ ಮನೆಯ ಈಗಿನಿಂದ ಸುಮಾರು ನಾಲ್ಕು ಹಿಂದಿನ ತಲೆಮಾರುಗಳ ವಿಷಯ ಗೊತ್ತು. ಇವನ ತಮ್ಮ ಊರ ಸುತ್ತಮುತ್ತ ನಡೆಯುವ ಜಾತ್ರೆಗಳಲ್ಲಿ ಕಿವಿ,ಬೆಂಡೋಲಿ-ಜುಮುಕಿ ಮಾರುವವ. ಅಣ್ಣನ ಮಗ ಕೈ ಉಂಗುರುಗಳ ಲಕ್ಕಿ ಸ್ಟೋನ್ ಸೇಲ್ ಮಾಡ್ತಾನೆ. ಅದ್ಯಾವಾಗ ಅಬ್ದುಲ್ ಕಲಾಂ ಮತ್ತು ಅಮಿತಾಭ್ ಬಚ್ಚನ್ ಇವನ ಅಂಗಡಿಗೆ ಬಂದು ಉಂಗುರುಗಳನ್ನು ಖರೀದಿಸಿದ್ದರೋ ಆ ಫೋಟೋಗಳೇ ಹೇಳಬೇಕು. ಎಲ್ಲರ ಬಗ್ಗೆ ಮಾತಾಡ್ತಾ ಮಾತಾಡ್ತಾ ನಾವು ನಮ್ಮ ಜೆ.ಡಿ/ಡಿ.ಜೆ ಯ ವಿಚಾರಾನೇ ಮರೆತು ಬಿಟ್ವಿ. ಸರಿ ನಮ್ಮ ಜೆ.ಡಿ/ಡಿ.ಜೆ ಯ ಬಾಳಿಗೆ ಬೆಳಕನ್ನು ಚೆಲ್ಲೋಣ.

ಜೆ.ಡಿ/ಡಿ.ಜೆ ಗೆ ಒಂದೇ ಜೋಡಿ ತಂದೆ ತಾಯಿ. (ಅಫೀಷಿಯಲ್) ಆಗಿ ಒಬ್ಬಳೇ ಹೆಂಡತಿ. ಒಬ್ಬನೇ ಮಗ "ನಾಣಿ", ಉಳಿದ ಐದು ಮಕ್ಕಳು ಸತ್ತುವು ಅದಕ್ಕೇ. ಜೆ.ಡಿ/ಡಿ.ಜೆ ಒಂದು ರೀತಿಯಲ್ಲಿ ಕೋಟ್ಯಾಧೀಶ್ವರ. ಆದರೆ ಅವನು ಕಣ್ಣಿಗೆ ಕಾಣುವ ಕೋಟ್ಯಾಧೀಶ್ವರ ಅಲ್ಲ. ಥೇಟ್ ಅವರಂತೆಯೇ ಬಾಳುವ ಅವನ ಲೈಫ್ ಸ್ಟೈಲ್ ಅವನನ್ನು ಈ ಊರಿನ ಸಾಹುಕಾರರ ಲಿಸ್ಟಿಗೆ ಸೇರಿಸಿಬಿಟ್ಟಿದೆ. ಸಂತೆ ಮಾರ್ಗದಲ್ಲಿ ಅರ್ಧ ದಾರಿ ಕ್ರಮಿಸಿದ ನಂತರ ತರಕಾರಿ ಅಂಗಡಿಗಳು ಪ್ರಾರಂಭಗೊಳ್ಳುತ್ತವೆ. ಸರಿಯಾಗಿ ಆ ಅಂಗಡಿಗಳು ಪ್ರಾರಂಭಗೊಳ್ಳುವ ಹಂತದಲ್ಲೇ ರಸ್ತೆ ಬಲ ಬದಿಯಲ್ಲಿ ಕವಲೊಡೆಯುತ್ತದೆ. ಅಲ್ಲಿ ಗಂಡಸರಿಗಾಗಿ ಕಟ್ಟಿಸಿರುವ ಶೌಚಾಲಯ ಇದೆ (ಕಟ್ಟಿಸಿರುವ ಅಂದ ಮಾತ್ರಕ್ಕೆ ಯಾರೂ ಬೇಕಾದರೂ ಉಪಯೋಗಿಸಬಹುದೋ ಅಂತ ಉಡಾಫೆ ವಿಚಾರ ಮಾಡಬೇಡಿ). ಅಲ್ಲಿಯೇ ಅಕ್ಕ-ಪಕ್ಕದಲ್ಲಿ ಒಂದೆರಡು ಪಾನ್ ಬೀಡಾ ಅಂಗಡಿಗಳು. ಈ ಶೌಚಾಲಯ ಆರಂಭಗೊಳ್ಳುವ ಮುಂಚೆ ಕಿಸಿಗಾಲಲ್ಲಿ ಒಂದು (ಎರಡು) ಲೈಟಿನ ಕಂಬ ಇದೆ. ಅದರ ಪಕ್ಕದಲ್ಲೇ ಒಂದು ಅಗಲವಾದ ಸಿಮೆಂಟು ಕಲ್ಲು ಅದಕ್ಕೆ ಸರಿಹೊಂದುವಂತಹ ಇನ್ನೂ ಒಂದೆರಡು ಅಗಲವಾದ ಕಲ್ಲುಗಳು ಹೊದಿಸಲಾಗಿದೆ ಈ ಊರಿನ ಒಳಚರಂಡಿ ವ್ಯವಸ್ಥೆಯ ಗಟಾರ್ ಗೆ. ಆ ಮೂತ್ರಿಯ ಸೆಂಟ್ ಇಲ್ಲಿಂದಲೇ ಫಿಲ್ಟರ್ ಗೊಂಡು ಮುಂದೆ ಹೋಗುವದು. ಈ ಅಗಲವಾದ ಚಪ್ಪಡಿಗಳ ಮೇಲೆಯೇ ನಮ್ಮ ಜೆ.ಡಿ/ಡಿ.ಜೆ ಯ ಶೊ ರೂಂ ಕಮ್ ಕಾರ್ಖಾನೆ ಕಮ್ ಕಾರ್ಪೋರೇಟ್ ಆಫೀಸ್.

ಮೊದಲೇ ಹೇಳಿದೆನಲ್ಲ ಈ ಜನಕ್ಕೆ ಒಂದಲ್ಲ ಒಂದು ಅದ್ಭುತ ಕಲೆ ಗೊತ್ತಿರುತ್ತೆ ಅಂತ. ಈ ನಮ್ಮ ಕಲಾವಲ್ಲಭನಿಗೆ ಬ್ರಿಟೀಷರ ಕಾಲದ ತಿಜೋರಿ ತಂದು ಕೊಡಿ. ಹೀರೋ ಸೈಕಲ್ಲಿನ ಹಿಂದಿನ ಚಕ್ರಕ್ಕೆ ಹಾಕಿದ ಲಾಕ್ ತಂದು ಕೊಡಿ, ಶೇಠ್ ಜಿ ಅಂಗಡಿಗೆ ಹಾಕಿದ ದೊಡ್ದ ಕೀಲಿ ಪತ್ತೆ ತಂದು ಕೊಡಿ. ಒಂದು ಸಾರಿ ಕೈ ಹಚ್ಚಿದರೆ ಎಂತಹ ಸಿಮ್-ಸಿಮ್ ಬಾಗಿಲೂ ಕೂಡ ತೆರೆದುಕೊಳ್ಳುತ್ತದೆ. ಅವನು ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡುತ್ತಾನೆ. ಒಂದು ಕೈಯಲ್ಲಿ ಅರ್ಧ ಮುರಿದ ಬ್ಲೇಡಿನಿಂದ ತನ್ನ ಕುರುಚಲು ಗಡ್ಡದ ಮೇಲೆ ಪರಾ-ಪರಾ ಎಂದು ಕೆರೆದುಕೊಳ್ಳುತ್ತ ಮತ್ತೊಂದು ಕೈಯಲ್ಲಿ ಕರಿಚುಟ್ಟವನ್ನು ಸೇದುತ್ತ ಕುಳಿತಿರುತ್ತಾನೆ. ಯಾರಪ್ಪನ ಅವಸರವೂ ಅವನಿಗೆ ನಡೆಯುವದಿಲ್ಲ. ಅವನ ಮೂಡ್ ಸರಿಯಾಗಿತ್ತೋ ಕರೆದ ಕೂಡಲೆ ಕೆಲಸಕ್ಕೆ ಹೊರಡುತ್ತಾನೆ, ಇಲ್ಲಾ ನೀವು ಹೇಳಿದ್ದು ತನಗಲ್ಲ ಎಂಬಂತೆ ಎರಡನೆ ಚುಟ್ಟಕ್ಕೆ ಬೆಂಕಿ ಕೊಡುತ್ತಾನೆ. ಸೈಕಲ್ ಕೀಲಿ ಕೈ ತೆಗೆಯುವುದಿರಲಿ, ಮನೆ ಕೀಲಿ ಮುರಿಯುವುದಿರಲಿ, ಅಂಗಡಿ ಕೀಲಿ ತೆರೆಯುವುದಿರಲಿ ಇಲ್ಲವೇ ಬ್ರಿಟೀಷರ ಸಾಮ್ರಾಜ್ಯದ ಖಜಾನೆ ಕೀಲಿ ಸರಿ ಮಾಡಿಕೊಡುವುದಿರಲಿ ರೇಟು ಮಾತ್ರ ಒಂದೇ; ಆ ಹೊತ್ತಿಗೆ - ಆ ದಿನಕ್ಕೆ ಬಾಯಿಗೆ ಬಂದದ್ದು. ಅವನು ಹಾಗೆಯೇ ಕಾಲ್ನಡಿಗೆಯಲ್ಲಿ ಬರುವುದಿಲ್ಲ. ಅವನನ್ನು ಸೈಕಲ್ ಮೇಲಾಗಲಿ, ಬೈಕಿನ ಮೇಲಾಗಲಿ, ಇಲ್ಲವೇ ಕಾರಿನಲ್ಲಾಗಲಿ ಕೂಡ್ರಿಸಿಕೊಂಡು ಕರೆದೊಯ್ದು ಮರಳಿ ಕೆಲಸದ ನಂತರ ಅವನಲ್ಲಿಗೆ ಬಿಟ್ಟು ಹೋಗಬೇಕು. ಬಲು ವಿಚಿತ್ರ ಆಸಾಮಿ. ಆದರೆ ಸುತ್ತ ಮುತ್ತಲಿನ ಜಿಲ್ಲೆಗಳಿಗೂ ಪ್ರಸಿದ್ಧಿ ಅವನ ನೀಯತ್ತು ಮತ್ತು ಅವನ ಕೈಯ ಕರಾಮತ್ತು.