Showing posts with label ಮಾಜಿ ಸಚಿವ ಎ ರಾಜಾಗೆ ಸಿಬಿಐ ನೋಟಿಸ್. Show all posts
Showing posts with label ಮಾಜಿ ಸಚಿವ ಎ ರಾಜಾಗೆ ಸಿಬಿಐ ನೋಟಿಸ್. Show all posts

Tuesday, December 21, 2010

ಮಾಜಿ ಸಚಿವ ಎ ರಾಜಾಗೆ ಸಿಬಿಐ ನೋಟಿಸ್

A Raja
ನವದೆಹಲಿ, ಡಿ. 21 : 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಅಗತ್ಯ ತನಿಖೆಗಾಗಿ ಹಾಜರಾಗುವಂತೆ ಮಾಜಿ ಟೆಲಿಕಾಂ ಸಚಿವ ಎ ರಾಜಾ ಹಾಗೂ ಕಾರ್ಪೊರೇಟ್ ಮಧ್ಯವರ್ತಿ ನೀರಾ ರಾಡಿಯಾಗೆ ಸಿಬಿಐ ಸೋಮವಾರ ನೋಟಿಸ್ ಕಳುಹಿಸಿದೆ. ಈ ಮಧ್ಯೆ ಹಗರಣದ ಆರೋಪಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ವರಿಷ್ಠ ಪ್ರದೀಪ್ ಭೈಜುಲಾ ಅವರನ್ನು ವಿಚಾರಣೆಗೊಳಪಡಿಸಿದೆ.

ಸಿಬಿಐ ತನಗೆ ನೋಟಿಸ್ ಕಳುಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಎ ರಾಜಾ, ನಾನು ಸಿಬಿಐಗೆ ಹೆದರಿಕೊಂಡಿಲ್ಲ. ನಾನೊಬ್ಬ ನ್ಯಾಯವಾದಿ. ನಾನು ಕಾನೂನನ್ನು ಪಾಲಿಸುತ್ತೇನೆಯೇ ಹೊರತು ಕಾನೂನನ್ನು ಉಲ್ಲಂಘಿಸಲಾರೆ ಎಂದು ಹೇಳಿದ್ದಾರೆ. ರಾಜಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕೋರಿ ಸಿಬಿಐ ಅವರ ಅಧಿಕೃತ ನಿವಾಸಕ್ಕೆ ನೋಟಿಸ್ ಕಳುಹಿಸಿದೆ. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ 160ನೇ ಸೆಕ್ಷನ್‌ ಅಡಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ದೇಶದ ಬೊಕ್ಕಸಕ್ಕೆ ಕನಿಷ್ಠ 22 ಸಾವಿರ ಕೋಟಿ ರುಪಾಯಿ ನಷ್ಟವುಂಟು ಮಾಡಿದ 2 ಸ್ಪೆಕ್ಟ್ರಂ ಹಗರಣದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿ ತನಿಖೆಗಾಗಿ ಸಿಬಿಐನಿಂದ ರಾಜಾ ಹಾಗೂ ರಾಡಿಯಾ ತನಿಖೆ ಎದುರಿಸಲಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇತ್ತೀಚೆಗೆ ದಿಲ್ಲಿ ಹಾಗೂ ತಮಿಳುನಾಡಿನಲ್ಲಿರುವ ರಾಜಾ, ರಾಡಿಯಾ ಹಾಗೂ ಬೈಜುಲಾ ಅವರಿಗೆ ಸೇರಿದ ನಿವೇಶನಗಳ ಮೇಲೆ ದಾಳಿ ನಡೆಸಿತ್ತು.